Wednesday, April 29, 2020

ಯಕ್ಷಮಟ್ಟುಕೋಶದಲ್ಲಿ ಮಟ್ಟುಗಳ ಸಂಖ್ಯೆ ಈಗ ೨೨ಕ್ಕೆ ಮುಟ್ಟಿದೆ!


ಸಹೃದಯಿ ಯಕ್ಷಬಾಂಧವರೇ,

ಯಕ್ಷವಾಹಿನಿಯ “ಯಕ್ಷಮಟ್ಟುಕೋಶ” ದಲ್ಲಿ  ಇನ್ನೂ ೧೨ ಮಟ್ಟುಗಳ ಸೇರ್ಪಡೆಯಾಗಿದ್ದು  ಈವರೆಗಿನ ದಾಖಲಿತ ಒಟ್ಟು ಮಟ್ಟುಗಳ ಸಂಖ್ಯೆ ೨೨ ಆಗಿದೆ. ಮಟ್ಟುಗಳ ವಿವರಗಳನ್ನು ಬೇರೆ ಬೇರೆ ದಸ್ತಾವೇಜುಗಳಲ್ಲಿ ಬರೆದು, ಕೊಂಡಿಗಳ ಮೂಲಕ ಯಕ್ಷಮಟ್ಟುಕೋಶದ ಕೋಷ್ಟಕದಲ್ಲಿ ಕೊಡಲಾಗಿದೆ. ಕೋಷ್ಟಕಕ್ಕಾಗಿ ಈ ಕೆಳಗಿನ ಕೊಂಡಿಯನ್ನು ಒತ್ತಿ.


 ಯಕ್ಷಮಟ್ಟುಗಳನ್ನು ಸರಳವಾಗಿ ಮತ್ತು ಅರ್ಥವತ್ತಾಗಿ ತಿಳಿಸುವ ಸದುದ್ದೇಶ ನಮ್ಮದು. ಈ ನಿಟ್ಟಿನಲ್ಲಿ ತ್ರಿವುಡೆಗೆ ಸಂಬಂಧಪಟ್ಟ ಸರಿ ಸುಮಾರು ೧೩ ಮಟ್ಟುಗಳ ವಿವರಗಳನ್ನು ದೃಷ್ಟಾಂತಸಹಿತ ತಿಳಿಸುವಲ್ಲಿ ಯಶಸ್ವಿಯಾಗಿ ಮುಂದಿನ ಹಂತದಲ್ಲಿ ತ್ರಿವುಡೆಯಲ್ಲಿ ರಚಿಸಲ್ಪಟ್ಟ ಇನ್ನೂ ಹಲವು ಮಟ್ಟುಗಳನ್ನು ಪದ್ಯದ ಉದಾಹರಣೆಯ ಜೊತೆಗೆ ನಿಮಗೆ ತಲುಪಿಸುವ ಪ್ರಯತ್ನದಲ್ಲಿದ್ದೇವೆ. ಇದರ ಜೊತೆಗೆ ಏಕತಾಳದಲ್ಲಿ ರಚಿಸಲ್ಪಟ್ಟ ಕೆಲವು ಮಟ್ಟುಗಳನ್ನು ಹೊಸತಾಗಿ ಕೋಷ್ಟಕಕ್ಕೆ ಸೇರಿಸುತ್ತಿದ್ದೇವೆ. ಈವರೆಗೂ ಬೇರೆ ಬೇರೆ ಕವಿಗಳ ಮತ್ತು ಅವರ ರಚನೆಯ ಪ್ರಸಂಗಗಳನ್ನು ಪರಿಶೀಲಿಸುತ್ತಿದ್ದು ವಿಭಿನ್ನವಾದ ಮಟ್ಟುಗಳು ಮತ್ತು ಪದ್ಯರಚನೆಗಳು ಕಂಡುಬರುತ್ತಿವೆ. ಹೀಗಾಗಿ ನಮಗೆ ದೊರಕಿದ ದೃಷ್ಟಾಂತಗಳ ಜೊತೆಗೆ ಆಯಾ ಮಟ್ಟುಗಳ ಪ್ರಭೇದಗಳನ್ನು ಕಾಲ ಕಾಲಕ್ಕೆ ಅದಕ್ಕೆ ಸಂಬಂಧಪಟ್ಟ ಮಟ್ಟಿನ ದಸ್ತಾವೇಜಿಗೆ ಸೇರಿಸಲಾಗುತ್ತಿದೆ. 

ಕ್ರಮೇಣ ಯಕ್ಷಸಾಹಿತ್ಯದಲ್ಲಿ ಲಭ್ಯವಿರುವ ಎಲ್ಲಾ  ಮಟ್ಟುಗಳ ಪ್ರಭೇದಗಳನ್ನು ನಿಮ್ಮ ಮುಂದಿಡುವ ನಿರಂತರ ಪ್ರಯತ್ನ ನಮ್ಮದು. ಈ ಕಾರ್ಯದಲ್ಲಿ ನೀವೂ ಕೂಡ ನಮ್ಮೊಂದಿಗೆ ಕೈ ಜೋಡಿಸಬಹುದು. ನಿಮಗೆ ತಿಳಿದಿರುವ (ನಮ್ಮ ಕೋಷ್ಟಕದಲ್ಲಿಲ್ಲದ) ವಿಶೇಷ ಮಟ್ಟುಗಳ ಲಕ್ಷಣ, ಪ್ರಭೇದ ಮತ್ತು ಪದ್ಯಗಳ ಉದಾಹರಣೆಗಳನ್ನು ನಮಗೆ ಕಳುಹಿಸಿ ಸಹಕರಿಸಬಹುದು. 

ಮಟ್ಟುಗಳು ಯಕ್ಷಗಾನ ಕಲೆಯ ಸೊಗಡಿನ ಜೀವಾಳಮಾತ್ರವಲ್ಲ ರಂಗದಲ್ಲಿ ರಸಸೃಷ್ಟಿಗೆ ಪೂರಕವಾದ ಮೂಲಭೂತವಾದ ತಳಹದಿ. ಯಕ್ಷಗಾನ ಸಾಹಿತ್ಯದ ಛಂದಸ್ಸುಗಳು ಈ ಮಟ್ಟುಗಳಿಗೆ ಆಧಾರಈ ಛಂದಸ್ಸಿಗೆ ಅನುಗುಣವಾಗಿ ಕೆಲವೇ ರಾಗ ತಾಳಗಳ ಸಂಯೋಜನೆಯು ಹೊಂದಿಕೊಂಡು ಯಕ್ಷಗಾನದ ಹಿಮ್ಮೇಳ ಗಾಯನವು ಸಂಪನ್ನಗೊಳ್ಳುತ್ತದೆ. ರಂಗದ ಮೇಲೆ ರಸ ಸೃಷ್ಟಿಯಲ್ಲಿ ಹಿಮ್ಮೇಳದ ಭಾಗವತನು ಪ್ರಥಮ ವೇಷಧಾರಿಯಾಗುವ ಜವಾಬ್ದಾರಿಯಲ್ಲಿದ್ದರೆ,  ಪ್ರಸಂಗವನ್ನು ರಚಿಸಿದ ಪ್ರಸಂಗಕವಿಯು  ಈ ಪ್ರಥಮ ವೇಷಧಾರಿಯನ್ನು ಮುನ್ನಡೆಸುವ ನಿರ್ದೇಶಕನಿರುತ್ತಾನೆ. ಆದುದರಿಂದಲೇಪ್ರಸಂಗವೊಂದನ್ನು ಆಡುವಾಗ ಪ್ರಸಂಗಕವಿಯನ್ನು ನೆನೆಯದೇ ಹೋಗುವುದು ಸುಸಂಸ್ಕೃತಿಯಲ್ಲ.

ಎಂದಿನವರೆಗೆ ಸೂಕ್ತ ಮಟ್ಟುಗಳ ಸದುಪಯೋಗ ಹಾಗೂ ಅದಕ್ಕೆ ಹೊಂದಿಕೊಂಡ ಸೂಕ್ತ ಹಿನ್ನಲೆ ಗಾಯನ ಇರುತ್ತದೋಅಲ್ಲಿಯವರೆಗೆ ಯಕ್ಷಗಾನ ಕಲೆಗೆ ಸಾವಿಲ್ಲ.  ಹಾಗಾಗಿ ಯಕ್ಷಗಾನ ಪ್ರಸಂಗಕವಿಯಾಗಬಯಸುವವನು ಮಟ್ಟುಗಳ ಸಾಮಾನ್ಯ ಜ್ಞಾನಅವುಗಳನ್ನು ಆಧರಿಸುವ ಛಂದಸ್ಸಿನ ಲಕ್ಷಣಕಥನದ ಸನ್ನಿವೇಶ ಮತ್ತು ಭಾವನಾಲಹರಿಗೆ ಹೊಂದಿಕೆ ಇವುಗಳ ಕುರಿತಾಗಿ ಸಂಪೂರ್ಣ ಹಿಡಿತವನ್ನು ಹೊಂದಲೇಬೇಕು. ಅದೇ ರೀತಿ ಭಾಗವತನಾದವನು ಸನ್ನಿವೇಶ ಹಾಗೂ ಭಾವನಾಲಹರಿಗೆ ಸೂಕ್ತವಾದಮುಖ್ಯವಾಗಿ ಮಟ್ಟಿನ ಛಂದೋಬಂಧಕ್ಕೆ ಹೊಂದಿಕೊಳ್ಳುವ ರಾಗ ತಾಳಗಳನ್ನೇ ಉಪಯೋಗಿಸುವ ವಿವೇಚನೆಯನ್ನು ಹೊಂದಿರಬೇಕು.

ಯಕ್ಷಗಾನದ ಉಳಿವುಬೆಳೆವಿನ ಮಾತುಗಳಿರುವಲ್ಲಿ ಯಕ್ಷಗಾನ ಮಟ್ಟುಗಳ ಕುರಿತಾದ ಕಾಳಜಿ ಅನಿವಾರ್ಯ. ಹಾಗಾಗಿಯಕ್ಷಗಾನದ ನೂರಾರು ಮಟ್ಟುಗಳನ್ನು ಸರಳವಾಗಿ ತಿಳಿಸಿಕೊಡುವುದೇ ನಮ್ಮ ಆಶಯ.  ಇಲ್ಲಿ ಮಟ್ಟುಗಳು ಯಾ ಅವುಗಳ ಹಿಂದಿನ ಯಕ್ಷಛಂದಸ್ಸುಗಳ ಕುರಿತಾದ ಗಾಢವಾದ ಪಾಂಡಿತ್ಯವನ್ನು ಮೆರೆಸುವ ಬದಲು ಸುಲಭ ಪಾಠಗಳನ್ನೇ ಒಪ್ಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮದು.

ಒಂದೊಂದೇ ಮಟ್ಟಿನ ವಿವರವಾದ ಮಾಹಿತಿಯನ್ನು ತಿಳಿಯುವ ಮುನ್ನಮಟ್ಟುಗಳ ಮತ್ತು ಯಕ್ಷಗಾನ ಛಂದಸ್ಸಿನ ನಡುವಿನ ನಂಟನ್ನು ಪೂರ್ವಭಾವಿಯಾಗಿ ಅರಿಯುವುದು ಅನಿವಾರ್ಯ. ಆದುದರಿಂದಲೇ ಪರಿಚಯಾತ್ಮಕವಾದ “ಮಟ್ಟಿನ ಸೌಧಕ್ಕೆ ಮೆಟ್ಟಿಲು” ಎಂಬ ಲೇಖನವನ್ನು ದಯವಿಟ್ಟು ಮೊದಲು ಓದಿ (ಕೊಂಡಿಯನ್ನು ಕೆಳಗೆ ಕೊಡಲಾಗಿದೆ). ಈ ಲೇಖನವನ್ನು ಪ್ರತೀ ಮಟ್ಟಿನ ವಿವರವಾದ ಮಾಹಿತಿ ದಸ್ತಾವೇಜಿನಲ್ಲೂಮಟ್ಟುಗಳ ಕೋಷ್ಟಕದಲ್ಲೂ ಕೊಂಡಿಯ ಮೂಲಕ ಸುಲಭದಲ್ಲಿ  ಓದಲು ಸಿಗುವಂತೆ ಕೊಟ್ಟಿದ್ದೇವೆ.


ಪ್ರತೀ ಮಟ್ಟಿನ ಕುರಿತಾದ ಮಾಹಿತಿ ವಿವರಗಳಲ್ಲಿ ರಂಗದ ಸನ್ನಿವೇಶಕ್ಕೆ ಹೊಂದಿಕೆ ಹಾಗೂ ಹಾಡಲು ಸೂಕ್ತವಾದ ರಾಗ ತಾಳಗಳ ಸಂಯೋಜನೆಗಳ ಕುರಿತಾಗಿಯೂ ಮಾತುಗಳಿರುವುದನ್ನು ಗಮನಿಸಿ. ಮುಂದಿನ ದಿನಗಳಲ್ಲಿಮಟ್ಟುಗಳಿಗೆ ಹೊಂದುವ ಸೂಕ್ತ ರಾಗ ತಾಳಗಳಲ್ಲಿಸೊಗಡುಗಳಲ್ಲಿ, ಹಾಡುಗಾರಿಕೆಯ ಧ್ವನಿಮುದ್ರಿಕೆಗಳ ಕೊಂಡಿಯನ್ನೂ ಸೇರಿಸುವ ಆಶಯದಲ್ಲಿದ್ದೇವೆ.

ಯಕ್ಷಗಾನಕ್ಕೆ ಸಂಬಂಧಿಸಿ ಅಂತರಜಾಲ ದಾಖಲೀಕರಣ ಹಾಗೂ ಉಚಿತ ಪ್ರಸಾರದ ಮೂಲಕ ಯಾರೂ ಈವರೆಗೆ ಮಾಡದ ಕೆಲಸಗಳನ್ನೇ ಆರಿಸಿಕೊಂಡು ಸ್ವಯಂಸೇವೆ ಬಲದಲ್ಲೇ ಸಾಗುತ್ತಿರುವ ನಮ್ಮ ಅನೇಕ ಪ್ರಯತ್ನಗಳಲ್ಲಿ “ಯಕ್ಷಮಟ್ಟುಕೋಶ”ವು ಅತೀ ಪ್ರಮುಖ ಕೆಲಸವಾಗಿ ಹೊಮ್ಮಲಿ ಎಂಬುದು ನಮ್ಮ ಪ್ರಾರ್ಥನೆ.


ಈ ಯೋಜನೆಯ ಅಭೂತಪೂರ್ವ ಯಶಸ್ಸಿಗಾಗಿ ನಿಮ್ಮ  ಸಹಾಯ, ಸಹಕಾರ ಹಾಗೂ ಶುಭಹಾರೈಕೆಯ ನಿರೀಕ್ಷೆಯಲ್ಲಿ,

ಶ್ರೀ ಶ್ರೀಧರ ಡಿ. ಎಸ್., ಪ್ರಧಾನ ನಿರ್ದೇಶಕರು
ಶ್ರೀ ಗಿಂಡೀಮನೆ ಮೃತ್ಯುಂಜಯ, ಸಹ ನಿರ್ದೇಶಕರು
ಶ್ರೀ ಅನಂತ ಪದ್ಮನಾಭ ಫಾಟಕ್‌, ಸಹ ನಿರ್ದೇಶಕರು
ಶ್ರೀ ಅಜಿತ್‌ ಕಾರಂತ್‌, ಪ್ರಧಾನ ಸಂಪಾದಕರು
ಶ್ರೀಮತಿ ಅಶ್ವಿನಿ ಹೊದಲ, ಸಹ ಸಂಪಾದಕರು
ಡಾ. ಆನಂದರಾಮ ಉಪಾಧ್ಯ, ಶ್ರೀ ನಟರಾಜ ಉಪಾಧ್ಯ, ಶ್ರೀ ರವಿ  ಮಡೋಡಿ (ವಿಶ್ವಸ್ಥರು, ಯಕ್ಷವಾಹಿನಿ ಸಂಸ್ಥೆ)

No comments:

Post a Comment